Thursday, 14 April 2016

ಯಶಸ್ವೀ ಗುರು:ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು


 
(the following article was written by S N Bhat Bayar ,published in “Yakshaprabha”(may 2009)
60 ರ ಹೊಸ್ತಿಲಲ್ಲಿ ಯಶಸ್ವೀ ಗುರು:ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು
5 ವರ್ಷಗಳ ಹಿಂದಿನ ನೆನಪು. ಮಳೆಗಾಲದ ಒಂದು ಶನಿವಾರ. ಮಂಗಳೂರು ಪುರಭವನದಲ್ಲೊಂದು ಸಹಾಯಾರ್ಥ ಯಕ್ಷಗಾನ ಪ್ರದರ್ಶನ. ಸಂಪೂರ್ಣ ಶ್ರೀ ದೇವೀ ಮಹಾತ್ಮೆ ಪ್ರಸಂಗ. ಅಂದಿನ ಹಿಮ್ಮೇಳ ಕಲಾವಿದರ ಪಟ್ಟಿ ಇಂತಿತ್ತು: ಸಿರಿಬಾಗಿಲು ರಾಮಕೃಷ್ಣ ಮಯ್ಯ, ಪದ್ಯಾಣ ಗೋವಿಂದ ಭಟ್, ಪಟ್ಲ ಸತೀಶ ಶೆಟ್ಟಿ, ಹೊಸಮೂಲೆ ಗಣೇಶ ಭಟ್, ಜಿ.ಕೆ.ನಾವಡ, ಕುಮಾರ ಸುಬ್ರಹ್ಮಣ್ಯ ವಳಕುಂಜ , ಕುದ್ರೆಕೋಡ್ಳು ರಾಮಮೂರ್ತಿ, ನಿಡುವಜೆ ಶಂಕರ ಭಟ್, ಕೃಷ್ಣ ರಾಜ ಮೊದಲಾದವರು. ಏನಿಲ್ಲಿ ವಿಶೇಷ? ಇವರೆಲ್ಲ ಉದಯೋನ್ಮುಖ ಕಲಾವಿದರು. ಮಿಗಿಲಾಗಿ ಮಾಂಬಾಡಿಯವರ ನೇರ ಶಿಷ್ಯರು!
ಶ್ರೀ ದೇವಿಮಹಾತ್ಮೆಯಂತಹ ಪರಂಪರೆಯ ಪ್ರಸಂಗವನ್ನು ಭಾಗವತಿಕೆ, ಚೆಂಡೆ, ಮದ್ದಳೆ ಈ ಮೂರೂ ಪ್ರಕಾರಗಳಲ್ಲೂ ಸಮರ್ಥವಾಗಿ ನಿರ್ವಹಿಸಬಲ್ಲ ಕಲಾವಿದರನ್ನು ತಯಾರುಮಾಡುವ ಸಾಮರ್ಥ್ಯದ ಅಪರೂಪದ ಸವ್ಯಸಾಚಿ ಶಿಕ್ಷಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು. ತೆಂಕುತಿಟ್ಟು ಹಿಮ್ಮೇಳದ ಶಿಕ್ಷಣಕ್ಕೊಂದು ಹೊಸ ಅಯಾಮ ಕೊಟ್ಟು, ಧರ್ಮಸ್ಥಳ “ಕೇಂದ್ರ”ದಲ್ಲಿ ಮೊತ್ತ ಮೊದಲ ಹಿಮ್ಮೇಳ  ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಾಜ್ಯಪ್ರಶಸ್ತಿ ವಿಜೇತ ಕೀರ್ತಿಶೇಷ  ಮಾಂಬಾಡಿ ನಾರಾಯಣ ಭಾಗವತರ ಸುಪುತ್ರರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ತನ್ನ ತಂದೆಯವರಂತೆ ಹಿಮ್ಮೇಳ ಶಿಕ್ಷಣ ಕರಗತವಾಗಿರುವುದು ತೆಂಕುತಿಟ್ಟಿಗಾದ ಮಹತ್ತರ ಲಾಭ ಮತ್ತು ಅವರು ನೀಡುವ ಸಾಂಪ್ರದಾಯಿಕ ಶಿಕ್ಷಣ ಯಕ್ಷ ಕಲಾರಂಗಕ್ಕೊಂದು ಅನನ್ಯ ಕೊಡುಗೆ.
1949 ಮಾರ್ಚ್ 27 ರಂದು ಜನಿಸಿದ ಮಾಂಬಾಡಿಯವರ ಮೊದಲ ವೃತಿ ಜೀವನ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಕಟೀಲು ಮೇಳದಿಂದ ಪ್ರಾರಂಭ. ತಂದೆಯವರಿಂದ ಕಲಿತ ಬಾಲಪಾಠದ ನಂತರ ಹೆಸರಾಂತ ಕಲಾವಿದರಾದ ಕುದ್ರೆಕೋಡ್ಲು ರಾಮ ಭಟ್ಟ, ನಿಡ್ಲೆ ನರಸಿಂಹ ಭಟ್ಟರ ಮೆಚ್ಚಿನ ಸಾಹಚರ್ಯದಿಂದ ಪ್ರಬುದ್ಧ ಕಲಾವಿದರಾಗಿ ರೂಪುಗೊಂಡ ’ಸುಬ್ಬಣ್ಣ’, ಮೃದಂಗದ ನಡೆಗಳನ್ನು ಅಭ್ಯಸಿಸಿದ್ದು ಕಾಂಚನ ರಾಮ ಭಟ್ಟರಲ್ಲಿ. ಮೂಲ್ಕಿ ಮೇಳ, ಕೂಡ್ಲು ಮೇಳಗಳಲ್ಲಿ ತಲಾ ಎರಡೆರಡು ವರ್ಷ ವ್ಯವಸಾಯ ನಡೆಸಿದ ಮಾಂಬಾಡಿಯವರ ಕಲಾಸೇವೆಯ ಉಚ್ಚ್ರಾಯದ ಪರ್ವ ಒಂಭತ್ತು ವರ್ಷ ಶ್ರೀ ಧರ್ಮಸ್ಥಳ ಮೇಳದ ತಿರುಗಾಟ ಹಾಗೂ ಕಡತೋಕ ಮಂಜುನಾಥ ಭಾಗವತರ ಜತೆಗಾರಿಕೆ.
ಇದರಂತೆಯೆ ಮುಂದೆ ಮೂರು ವರ್ಷ ಕದ್ರಿ ಮೇಳದಲ್ಲಿ ಪ್ರತಿಭಾನ್ವಿತ ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಜತೆಗಿನ ವ್ಯವಸಾಯ. ಕದ್ರಿ ಮೇಳದ ಹೊಸ ಪ್ರಯೋಗಗಳಿಗೆ ಹೊಳ್ಳರ ಹಾಡುಗಾರಿಕೆ ಮತ್ತು ಮಾಂಬಾಡಿಯವರ ಚೆಂಡೆ ಒಂದು ರಸಪಾಕ ಎನ್ನುವಂತಿತ್ತು ಅಂದಿನ ಪಕ್ಕವಾದ್ಯ ಹೊಂದಾಣಿಕೆಗಳು!
ಹೀಗೆ ಸುಮಾರು ಇಪ್ಪತ್ತು ವರ್ಷ ವ್ಯವಸಾಯಿಯಾಗಿದ್ದ ಮಾಂಬಾಡಿಯವರು ಜೊತೆ ಜೊತೆಗೇ ಹಿಮ್ಮೇಳ ಶಿಕ್ಷಣಕ್ಕೂ ಕೈ ಹಚ್ಚಿದ್ದು 1968 ರಲ್ಲಿ ಕಲಾತಪಸ್ವಿ ದಿ.ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ  ಆಹ್ವಾನದಂತೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದಲ್ಲಿ. ಆ ನಂತರ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಾಂಬಾಡಿಯವರ ಹಿಮ್ಮೇಳ ತರಗತಿಗಳು ನಡೆದಿವೆ. ಹಲವಾರು ಉದಯೋನ್ಮುಖ ಕಲಾವಿದರು ರೂಪುಗೊಂಡಿದ್ದಾರೆ. ಅವರೇ ಹೇಳುವಂತೆ: “ಕ್ಲಾಸಿಗೆ ಸೇರುವವರೆಲ್ಲ ಕಲಾವಿದರಾಗುವುದಿಲ್ಲ, ಆದರೂ ಯಕ್ಷಗಾನದ ಬಗ್ಗೆ ಸಹೃದಯತೆ ಮೈಗೂಡಿಸುತ್ತಾರೆ. ಉತ್ತಮ ವಿದ್ಯಾವಂತರೂ, ನೌಕರಿಯಲ್ಲಿರುವವರೂ ಕ್ಲಾಸಿಗೆ ಬರುವುದರಿಂದ ಹವ್ಯಾಸಿ ರಂಗಕ್ಕೆ ಉತ್ತಮ ಭವಿಷ್ಯ ಖಂಡಿತ”.
 
ಮಾಂಬಾಡಿಯವರ ವಿಶೇಷತೆಯೆಂದರೆ ಅವರ ಚೆಂಡೆ ಮದ್ದಳೆಗಳಲ್ಲಿ ಕಂಡುಬರುವ ನುಡಿಗಾರಿಕೆ ಮತ್ತು ’ಕುಸುರಿ’ ಕೆಲಸಗಳು. ಕೆಲವೊಮ್ಮೆ ಇವರ ’ಪೆಟ್ಟುಗಳು’ ವೇಷಧಾರಿಗೆ ಅಬ್ಬರ ಸಾಲದೆಂಬಂತೆ ಅನಿಸಿದರೂ, ಕಲಾವಿದರ ಮನೋಧರ್ಮವನ್ನರಿತು ಜಾಣ್ಮೆಯ ಚೆಂಡೆ ಮದ್ದಳೆ ನುಡಿಸುವ ಇವರ ಕಲಾ ಪ್ರೌಢಿಮೆ ಕಲಾಸ್ವಾದಕರಿಗೆ ರಸದೌತಣ ನೀಡುತ್ತದೆ. ಇವರ ಕುಟುಂಬದವರೇ ಆದ ಮತ್ತೊಬ್ಬ ಪ್ರತಿಭಾನ್ವಿತ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್ಟರೊಂದಿಗೆ ಹಾಗೂ ಇತರ ಪ್ರಸಿದ್ಧ ಕಲಾವಿದರೊಂದಿಗೆ ಹಲವು ವೇದಿಕೆಗಳಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ನಡೆಸಿಕೊಟ್ಟ ’ಜುಗುಲ್ ಬಂದಿಗಳು’ ಕೇಳುಗರ ಮನ ಸೂರೆಗೊಂಡಿವೆ.  ಪ್ರಸಿದ್ಧರಾದ ಹಿರಿಯ ಹಾಗೂ ಹೊಸ ತಲೆಮಾರಿನ ಭಾಗವತರೆಲ್ಲರಿಗೂ ’ಸಾಥಿ’ಯಾಗಿ ಅನುಭವವಿರುವ ಮಾಂಬಾಡಿಯವರು ಪರಂಪರೆ ಮತ್ತು ಹೊಸತನದ ಸಮಾಗಮ. ಅತ್ಯಂತ ಲಯಬದ್ಧವಾಗಿ, ಛಂದೋಬದ್ಧವಾಗಿ ಹಾಡಬಲ್ಲ ಮಾಂಬಾಡಿಯವರ ಭಾಗವತಿಕೆಯ ಸಾಮರ್ಥ್ಯ ಬೆರೆಗುಗೊಳಿಸುವಂತಹದು. ಹವ್ಯಾಸಿಯಾಗಿಯೂ ಅತ್ಯಂತ ಬೇಡಿಕೆಯಲ್ಲಿದ್ದ ಮಾಂಬಾಡಿಯವರು, ಬೇಡಿಕೆಯಿರುವಾಗಲೇ ಯುವಕರಿಗಾಗಿ ರಂಗದಿಂದ ನಿರ್ಗಮಿಸಿದ ಅಪರೂಪದ ಕಲಾವಿದರು.
ಹಿಮ್ಮೇಳದ ಮೂರೂ ಪ್ರಕಾರಗಳನ್ನೂ ’ಇದಮಿತ್ಥಂ” ಎಂದು ಕಲಿಸಬಲ್ಲ ಮಾಂಬಾಡಿಯವರು ತನ್ನ ಜ್ನಾನವನ್ನು ಸಂಪೂರ್ಣವಾಗಿ ಶಿಷ್ಯರಿಗೆ ಧಾರೆಯೆರೆಯಲು ಹಂಬಲಿಸುವ ಅಪರೂಪದ ಶಿಕ್ಷಕರು. ಶಿಷ್ಯರ ಅಭ್ಯುದಯದಲ್ಲಿ ಸಾರ್ಥಕತೆ ಕಾಣುವ ಮಾಂಬಾಡಿಯವರಲ್ಲಿ ವೃತ್ತಿನಿರತ ಶಿಷ್ಯರ ತಪ್ಪುಗಳಿದ್ದರೆ ಪ್ರೀತಿಯಿಂದ ತಿದ್ದಿ, ತಿಳಿ ಹೇಳುವ ದೊಡ್ಡಗುಣವಿದೆ. ಅಚ್ಚು ಮೆಚ್ಚಿನ ಹಲವು ಶಿಷ್ಯರನ್ನು ಹೊಂದಿರುವ ಮಾಂಬಾಡಿಯವರಿಗೆ ತಾನು ಸಿದ್ಧ ಪಡಿಸಿದ ಹಿಮ್ಮೇಳ ಶಿಕ್ಷಣದ ಅತ್ಯಂತ ಸರಳ ಮತ್ತು ಸಂಪ್ರದಾಯಬದ್ಧ ಸಾಹಿತ್ಯವನ್ನು ಕಿರಿಯ ಹಾಗೂ ಹಿರಿಯ ಅಭ್ಯಾಸಿಗಳ ಉಪಯೋಗಕ್ಕಾಗಿ ದಾಖಲಿಸಬೇಕೆಂಬ ಗುರಿಯಿದೆ. ಶ್ರೀಗಳಾದ ವಿಶ್ವವಿನೋದ ಬನಾರಿ, ವಳಕುಂಜ ಕುಮಾರ ಸುಬ್ರಹ್ಮಣ್ಯ ಮೊದಲಾದವರು ಮಾಂಬಾಡಿ ’ಘರಾನ’ದಲ್ಲಿ ಕಲಿಸಿಕೊಟ್ಟು ಈಗಾಗಲೇ ಯಶಸ್ವಿಯಾಗಿರುವ ಹಿರಿಯ ಅಭಿಮಾನಿ ಶಿಷ್ಯರು.
 
ವೃತ್ತಿಪರ ಮೇಳಗಳಿಂದ ದೂರವಾದ ಮೇಲೆ ಪೂರ್ಣ ಪ್ರಮಾಣದಲ್ಲಿ ’ಕ್ಲಾಸು’ಗಳಲ್ಲಿ ತೊಡಗಿ ಜೀವನೋಪಾಯದೊಂದಿಗೆ ಆತ್ಮಾನಂದವನ್ನೂ ಸಂಪಾದಿಸುವ ಮಾಂಬಾಡಿಯವರದ್ದು ಸಣ್ಣ ಹಿಡುವಳಿಯೊಂದಿಗೆ ಪತ್ನಿ, ಇಬ್ಬರು ಇಂಜಿನಿಯರ್ ಪುತ್ರರ ಸುಖೀ ಸಂಸಾರ.ಹಿರಿಯ ಮಗ ವೇಣುಗೋಪಾಲ ತನ್ನ ಸಾಫ಼್ಟ್ ವೇರ್ ವೃತ್ತಿ ಜೀವನದೊಂದಿಗೆ ಬೆಂಗಳೂರಿನಲ್ಲಿ ಹವ್ಯಾಸಿ ಚೆಂಡೆವಾದಕರಾಗಿ ಮನೆತನದ ಕಲಾಸೇವೆಯನ್ನು ಮುಂದುವರಿಸುತ್ತಿದ್ದಾರೆ. ಇವರ ನುಡಿಸುವಿಕೆಯಲ್ಲೂ ಮಾಂಬಾಡಿಯವರ ಅತಿಸುಂದರ ’ಉರುಳಿಕೆ’ ಮತ್ತು ಸೂಕ್ಷ್ಮತೆಯ ವಿಶೇಷತೆಯಿದೆ.
ಸುಬ್ರಹ್ಮಣ್ಯ ಭಟ್ಟರ ಕಲಾಸೇವೆಯನ್ನು ಗುರುತಿಸಿ ದೆಹಲಿ ಕನ್ನಡ ಸಂಘ, ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾಢಳಿತ ಇವರನ್ನು ಸೂಕ್ತ ವೇದಿಕೆಗಳಲ್ಲಿ ಸನ್ಮಾನಿಸಿವೆ.
ಮುಪ್ಪರಿಗೊಂಡ ಮಹಾನ್ ಪ್ರತಿಭೆ ಮಾಂಬಾಡಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಶುಭ ಹಾರೈಸುತ್ತಾ ಇನ್ನಷ್ಟು ಕಲಾಸೇವೆಯನ್ನು ನಿರೀಕ್ಷಿಸೋಣ.
             *  ಶಂ.ನಾ.ಬಾಯಾರು